ನವದೆಹಲಿ: ಎಂಬಿಬಿಎಸ್ ವೈದ್ಯರಷ್ಟೇ ವೇತನವನ್ನು ಪಡೆಯಲು ಆಯುರ್ವೇದ ವೈದ್ಯರೂ ಕೂಡ ಅರ್ಹರು ಎನ್ನುವ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಅಲ್ಲದೇ, ಎಂಬಿಬಿಎಸ್ ವೈದ್ಯರಷ್ಟೇ ಸಮಾನವಾಗಿ ಆಯುರ್ವೇದ ವೈದ್ಯರು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಂಶ ವನ್ನು ಅಲ್ಲಗಳೆಯುವಂತಿಲ್ಲ ಎಂದಿದೆ. ಆಯುರ್ವೇದ ವೈದ್ಯರು ಕೂಡ ಎಂಬಿಬಿಎಸ್ ವೈದ್ಯರಂತೆ ಟಿಕ್ಕು ವೇತನ ಆಯೋಗದ ಶಿಫಾರಸಿನಂತೆ ವೇತನ ಪ್ರಯೋಜನಗಳನ್ನು ಪಡೆಯಲು ಅರ್ಹರು ಎಂದು 2013ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ವನ್ನು ಪ್ರಶ್ನಿಸಿ, ಗುಜರಾತ್ ಸರ್ಕಾರ ಸುಪ್ರೀಂ ಮೆಟ್ಟಿ ಲೇರಿದೆ. ಆಯುರ್ವೇದವು ದೇಶದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ್ದಲ್ಲದೇ, ಹೆಮ್ಮೆಯ ಸ್ಥಾನವನ್ನೂ ಗಿಟ್ಟಿಸಿದೆ. ಆದರೆ ಆಧುನಿಕ ಕಾಲದಲ್ಲಿ ಎಂಬಿಬಿಎಸ್ ವೈದ್ಯರು ನಡೆಸುವ ಶಸ್ತ್ರಚಿಕಿತ್ಸೆಗಳನ್ನು ಆಯುರ್ವೇದ ವೈದ್ಯರು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಸಮಾನ ವೇತನದ ಪ್ರಸ್ತಾಪ ಸರಿಯಲ್ಲವೆಂದು ನ್ಯಾಯಪೀಠ ಹೇಳಿದೆ.