ದಾವಣಗೆರೆ: ಪೊಲೀಸ್ ಠಾಣೆಗೆ ಯುವಕರನ್ನು ಕರೆ ತಂದಿರುವ ವಿಚಾರದ ಬಗ್ಗೆ ಕೇಳಲು ಠಾಣೆಗೆ ಬಂದಿದ್ದಂತಹ ಮಹಿಳೆಯರು, ಮಕ್ಕಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಬುಧವಾರ ಸಂಜೆ ಜಗಳೂರಿನಲ್ಲಿ ನಡೆದಿದೆ.
ಜಗಳೂರಿನಲ್ಲಿ ದೊಡ್ಡ ಮಾರಮ್ಮನಜಾತ್ರೆ ಸಂದರ್ಭದಲ್ಲಿ ಮಂಗಳವಾರ ರಾತ್ರಿ ಕೆಲ ಕಿಡಿಗೇಡಿಗಳಿಂದ ವಾಹನಗಳಿಗೆ ಹಾನಿ ಮಾಡಲಾಗಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ತಕ್ಕೂ ಹೆಚ್ಚು ಯುವಕರನ್ನ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಅನಗತ್ಯವಾಗಿ ತಮ್ಮ ಮಕ್ಕಳ ಕರೆತರಲಾಗಿದೆ ಎಂದು ಪೋಷಕರು, ಸಂಬಂಧಿಕರು ಪೊಲೀಸ್ ಠಾಣೆಗೆ ಕೇಳಲು ಬಂದಾಗ ವಾಗ್ವಾದ ನಡೆದಿದೆ. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೆಟ್ಟಾಗಿದೆ.