ತೆಲಂಗಾಣ: ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆಗೆ ಹಾವು ಕಚ್ಚಿದೆ. ತಕ್ಷಣ ಮಹಿಳೆ ಹಾವನ್ನು ಹೊಡೆದು ಕೊಂದಿದ್ದು, ಬಳಿಕ ಸತ್ತ ಹಾವನ್ನು ಡಬ್ಬಿಯಲ್ಲಿ ಹಾಕಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ.
ಈ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಕೈಯಲ್ಲಿ ಹಾವು ಇದ್ದುದನ್ನು ಕಂಡು ವೈದ್ಯಕೀಯ ಸಿಬ್ಬಂದಿ ಗಾಬರಿಗೊಂಡಿದ್ದಾರೆ.
ಮುಳುಗು ಜಿಲ್ಲೆಯ ವೆಂಕಟಾಪುರಂ ಮಂಡಲದ ಮುಕುನೂರುಪಾಲೆಂ ಗ್ರಾಮದ ಶಾಂತಾ ಎಂಬ ಮಹಿಳೆ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆಗೆ ಹಾವು ಕಚ್ಚಿದೆ.ಕೂಡಲೇ ಎಚ್ಚೆತ್ತ ಮಹಿಳೆ ತನ್ನ ಸಹ ಕಾರ್ಮಿಕರೊಂದಿಗೆ ಸೇರಿ ಹಾವನ್ನು ಹೊಡೆದು ಸಾಯಿಸಿದ್ದಾರೆ. ಅಲ್ಲಿಂದ ಕೂಡಲೇ ವೆಂಕಟಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾರೆ.
ಆದರೆ ಹೊರಡುವಾಗ ಆಕೆಗೆ ಅನುಮಾನವೊಂದು ಹುಟ್ಟಿಕೊಂಡಿದೆ. ಆಸ್ಪತ್ರೆಗೆ ಹೋದರೆ ಯಾವ ಹಾವು ಕಚ್ಚಿದೆ ಎಂದು ವೈದ್ಯರು ಕೇಳಿದರೆ ಏನು ಮಾಡಲಿ ಎಂದು ತಿಳಿಯದೇ ಮಹಿಳೆ ಕೊಂದ ಹಾವನ್ನು ಡಬ್ಬಿಯೊಂದರಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದಾಳೆ.
ತಬ್ಬಿಬ್ಬಾದ ವೈದ್ಯಕೀಯ ಸಿಬ್ಬಂದಿ ಮಹಿಳೆಯ ಕೈಯಲ್ಲಿ ಸತ್ತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಕ್ಷಣವೇ ವೈದ್ಯಕೀಯ ಸೇವೆ ಒದಗಿಸಲಾಗಿದೆ. ಸದ್ಯ ಶಾಂತಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.