Spread the love

ಶಿವಮೊಗ್ಗ: ನಗರದ ಅಭ್ಯುದಯ, ಶಾಂತಿ ಸ್ಥಾಪನೆ, ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಂತೆ ಮಾಡುವ ದೃಷ್ಟಿಯಿಂದ ಆಯನೂರು ಮಂಜುನಾಥ ಅವರನ್ನು ಬೆಂಬಲಿಸುವುದು ಅವಶ್ಯಕ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ಕೆ ಬಿ. ಪ್ರಸನ್ನಕುಮಾರ್  ಹೇಳಿದರು.

ನಗರದ  ಜೆಡಿಎಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್‌ನಿಂದ ಪಕ್ಷಕ್ಕೆ ಸೇರ್ಪಡೆಗೊಂಡ ಹಲವರನ್ನು ಸ್ವಾಗತಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿ ಮನೆಮನೆಗೆ ಕಾರ್ಯಕರ್ತರು ತೆರಳಿ ಅಭ್ಯರ್ಥಿಯ ಪರ ಪ್ರಚಾರ ಮಾಡಬೇಕು. ಪಕ್ಷವನ್ನು ಬಲಪಡಿಸಬೇಕು. ಬೂತ್ ಹಂತದಿಂದ ಪಕ್ಷದ ಸಮಿತಿ ರಚನೆಯಾಗಬೇಕು. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬರುವವರು ಇನ್ನೂ ಸಾಕಷ್ಟಿದ್ದಾರೆ. ಇವತ್ತು ಸೇರಿರುವವರು ಕೇವಲ ಸ್ಯಾಂಪಲ್ ಮಾತ್ರ  ಎಂದರು.

ಅಭ್ಯರ್ಥಿ ಆಯನೂರು ಮಂಜುನಾಥ ಮಾತನಾಡಿ, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಈ ಮೂರು ಕ್ಷೇತ್ರದಿಂದ ಜೆಡಿಎಸ್ ಉಮೇದುವಾರರು ಗೆಲ್ಲುವಂತಾಗಬೇಕು. ಇದರಿಂದ ಪಕ್ಷಕ್ಕೆ ಬಲ ಬರುತ್ತದೆ. ಆಗ ಜನರ ಸಮಸ್ಯೆ, ಅವಶ್ಯಕತೆಗಳ ಬಗ್ಗೆ ನಾವು ಸದನದಲ್ಲಿ ಮಾತನಾಡಿ, ಪರಿಹರಿಸಲು ಅನುಕೂಲವಾಗುತ್ತದೆ. ಈಗ ದಿನೇ ದಿನೇ ಪಕ್ಷ ಬಲಗೊಳ್ಳುತ್ತಿದೆ. ಅದೇ ರೀತಿ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಪ್ರಚಾರ ಮಾಡಬೇಕು. ಪಕ್ಷದ ವಿಜಯಕ್ಕೆ ಬೇಕಾದ ತಂತ್ರಗಳನ್ನು ರೂಪಿಸಬೇಕು. ಉಮೇದುವಾರರ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಸಾರ್ವಜನಿಕವಾಗಿ ಜನರು ಜೆಡಿಎಸ್ ಬಗ್ಗೆ ಚರ್ಚಿಸುವಂತಾಗಬೇಕೆಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬರಬೇಕು. ಎಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುವುದಕ್ಕೆ ಅವಕಾಶ ಮಾಡಿಕೊಡಬೇಕು. ಶಿವಮೊಗ್ಗದಲ್ಲಿ ಶಾಂತಿ ಸ್ಥಾಪಿಸಲು ಜೆಡಿಎಸ್ ಬೆಂಬಲಿಸುವುದು ಅವಶ್ಯಕ. ಈ ಮೂಲಕ ಜೆಡಿಎಸ್‌ನ್ನು ಗೆಲ್ಲಿಸಿ ಹೊಸ ಬೆಳವಣಿಗೆಗೆ ನಾಂದಿ ಹಾಡಬೇಕಿದೆ ಎಂದರು.

ಕಾಂಗ್ರೆಸ್ ಉತ್ತರ ಬ್ಲಾಕ್ ಅಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ  ಮುಜೀಬ್, ಮಂಜುನಾಥ ಗೌಡ, ರಘು, ಬೊಮ್ಮನಕಟ್ಟೆ ಮಂಜುನಾಥ ಮೊದಲಾದವರು ನೂರಾರು ಕಾರ್ಯಕರ್ತರೊಂದಿಗೆ ಪಕ್ಷ ಸೇರಿದರು. ಇವರೆಲ್ಲರಿಗೆ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ ಜೆಡಿಎಸ್ ಶಾಲು ಹೊದಿಸಿ ಬರಮಾಡಿಕೊಂಡರು.

Leave a Reply

Your email address will not be published. Required fields are marked *