ಮಂಡ್ಯ : ಭಯದಿಂದ ಹೆಚ್.ಡಿ ಕುಮಾರಸ್ವಾಮಿ ಮಂಡ್ಯಕ್ಕೆ ಬಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರನ್ನ ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಂಡ್ಯದಲ್ಲಿಂದು ಐತಿಹಾಸಿಕ ದಿನ. ರಾಹುಲ್ ಗಾಂಧಿಗೆ ಶಕ್ತಿ ತುಂಬುವುದಕ್ಕೆ ಜನ ಬಂದಿದ್ದೀರಿ. ಮಂಡ್ಯದಲ್ಲಿ ಚಂದ್ರು ನೂರಕ್ಕೆ ನೂರು ಗೆಲ್ಲಾತಾರೆ. ಮಂಡ್ಯದಲ್ಲಿ ಕಳೆದ ಬಾರಿ ನಿಖಿಲ್ ಗೆಲ್ಲಲಿಲ್ಲ. ಈಗ ಭಯದಿಂದ ಹೆಚ್ ಡಿ ಕುಮಾರಸ್ವಾಮಿ ಮಂಡ್ಯಕ್ಕೆ ಬಂದಿದ್ದಾರೆ. ಮಂಡ್ಯದಲ್ಲೂ ಹೆಚ್ ಡಿಕೆ ಸೋಲಿಸಿ ಎಂದು ಹೇಳಿದರು.
ಇದು ಸತ್ಯ ಸುಳ್ಳಿನ ನಡುವೆ ನಡೆಯುತ್ತಿರುವ ಸಂಘರ್ಷ. ಮೋದಿ 2014ರಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. 10 ವರ್ಷವಾದರೂ ಅಚ್ಚೇದಿನ್ ಬಂದಿಲ್ಲ. ಬಡವರು ಜೀವನ ನಡೆಸಲು ಕಷ್ಟಪಡುತ್ತಿದ್ದರು. ಹೀಗಾಗಿ ಜನರನ್ನ ಆರ್ಥಿಕವಾಗಿ ಸಬಲ ಮಾಡಲು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.
ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಿಸಿದ್ದೇವೆ. ಮೋದಿ ಸುಳ್ಳು ಹೇಳುತ್ತಿದ್ದಾರೆ. ಜನರ ನಡುವೆ ಮೋದಿ ಸಂಘರ್ಷ ತಂದಿಡುತ್ತಿದ್ದಾರೆ. ಬಿಜೆಪಿಯವರು ನಮಗೆ ಮೋಸ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.