Spread the love

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಸ್ತಿಯು ಕಳೆದ ಐದು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿರುವುದಾಗಿ ತಿಳಿದುಬಂದಿದೆ.

ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಮಪತ್ರ ಸಲ್ಲಿಸಿದರು. ಈ ವೇಳೆ ತಮ್ಮ ಆಸ್ತಿ ವಿವರವನ್ನೂ ನೀಡಿದರು.

ಇದರಂತೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಅಂದರೆ, 2018ರಲ್ಲಿ 6.09 ಕೋಟಿಯಷ್ಟಿದ್ದ ಬೊಮ್ಮಾಯಿಯವರ ಆಸ್ತಿ ಇದೀಗ 28.94 ಕೋಟಿಗೆ ಹೆಚ್ಚಾಗಿರುವುದು ಕಂಡು ಬಂದಿದೆ.

ಇದರಂತೆ ಅವರ ಸ್ಥಿರಾಸ್ತಿಗಳ ಮೌಲ್ಯ 3.77 ಕೋಟಿ ರೂ.ಗಳಿಂದ 22.96 ಕೋಟಿ ರೂ.ಗೆ ಏರಿಕೆಯಾಗಿದ್ದು, ಆರು ಪಟ್ಟು ಹೆಚ್ಚಾಗಿದೆ. ಅದೇ ರೀತಿ ಚರಾಸ್ತಿ ಮೌಲ್ಯ 2.32 ಕೋಟಿ ರೂ.ನಿಂದ 5.98 ಕೋಟಿ ರೂ.ಗೆ ಏರಿಕೆಯಾಗಿದೆ.

ಭಾರತೀಯ ಚುನಾವಣಾ ಆಯೋಗದ ಮುಂದೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಬೊಮ್ಮಾಯಿ ಅವರು 28,93,94,208 ರೂಪಾಯಿ ಮೌಲ್ಯದ ಆಸ್ತಿ ಮತ್ತು 5,79,20,753 ರೂಪಾಯಿಗಳ ಸಾಲ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹಿಂದೂ ಅವಿಭಜಿತ ಕುಟುಂಬ ಎಂಬ ಕಾಲಂ ಅಡಿಯಲ್ಲಿ ಅವರು 20,77,41,231 ರೂ.ಗಳ ಪಿತ್ರಾರ್ಜಿತ ಆಸ್ತಿಯನ್ನು ಘೋಷಿಸಿದ್ದಾರೆ. ಹಾಗಾಗಿ ಬೊಮ್ಮಾಯಿ ಏನರ ಒಟ್ಟು ಆಸ್ತಿ 49.70 ಕೋಟಿ ರೂ ಗಳಾಗಿದೆ.

ಇದಲ್ಲದೆ ಬೊಮ್ಮಾಯಿಯವರ ಬಳಿಕ 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳಿದ್ದು, ಅವರ ಪತ್ನಿ ಚೆನ್ನಮ್ಮ 78.83 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದಾರೆಂದು ತಿಳಿಸಿದ್ದಾರೆ.

ಯಲಹಂಕ ಮತ್ತು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಕೃಷಿಯೇತರ ಜಮೀನು, ಹುಬ್ಬಳ್ಳಿ ಹೊರವಲಯದ ತಾರಿಹಾಳ್ ಗ್ರಾಮದಲ್ಲಿ ಕೃಷಿ ಭೂಮಿ ಹಾಗೂ ಕುಂದಗೋಳ ತಾಲೂಕಿನ ಕಮಡೊಳ್ಳಿಯಲ್ಲಿ ಕೃಷಿ ಭೂಮಿ. ಮೂರು ವಾಣಿಜ್ಯ ಮತ್ತು ನಾಲ್ಕು ವಸತಿ ಕಟ್ಟಡಗಳಿರುವುದಾಗಿ ಘೋಷಿಸಿದ್ದಾರೆ.

ತಮ್ಮ ಪುತ್ರ ಭರತ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರೊಂದಿಗೆ ಶಿಗ್ಗಾಂವಿಗೆ ಆಗಮಿಸಿದ ಬೊಮ್ಮಾಯಿಯವರು, ಶನಿವಾರವನ್ನು ಶುಭದಿನವೆಂದು ಪರಿಗಣಿಸಿ ನಾಮಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *