ವಾಷಿಂಗ್ಟನ್: ಅಮೆರಿಕದ ಮಿನೆಸೋಟ ರಾಜ್ಯದ ವ್ಯಕ್ತಿಯೊಬ್ಬ 5 ಇಂಚು ಎತ್ತರವಾಗಲು ಅತ್ಯಂತ ನೋವಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅದಕ್ಕಾಗಿ ಮಾಡಿರುವ ವೆಚ್ಚ 1.35 ಕೋಟಿ ರೂ.! ಮೋಸೆಸ್ ಗಿಬ್ಸನ್(41) ಅವರು 5.5 ಇಂಚು ಇದ್ದರು. ಇದರಿಂದ ಅವರಿಗೆ ಅಳುಕಿತ್ತು. ಸಾಫ್ಟ್ವೇರ್ ಎಂಜಿನಿಯರ್ ಆದ ಈತ, ಶಸ್ತ್ರಚಿಕಿತ್ಸೆಗೆ ಕಾಸು ಹೊಂದಿಸಲು ಕ್ಯಾಬ್ ಚಾಲಕನಾಗಿ ಕೂಡ ಹೆಚ್ಚುವರಿ ಕೆಲಸ ಮಾಡಿದ್ದಾರೆ.
“ಮಹಿಳೆಯರು ಮತ್ತು ಇತರರ ಜತೆಗೆ ಇದ್ದಾಗ ನನ್ನ ಆತ್ಮವಿಶ್ವಾಸ ಕುಂಠಿತವಾಗುತ್ತಿತ್ತು. ಇದರಿಂದ ಡೇಟಿಂಗ್ ಮಾಡಲು ಹಿಂಜರಿಕೆಯಾಗುತ್ತಿತ್ತು. ಉದ್ದ ಬೆಳಯಲು ಮಾತ್ರೆಗಳನ್ನು ತೆಗೆದುಕೊಂಡೆ. ಆಧ್ಯಾತ್ಮಿಕ ವ್ಯಕ್ತಿಯ ಮೊರೆ ಹೋದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ” ಎಂದು ಮೊಸೆಸ್ ವಿವರಿಸಿದ್ದಾರೆ. “2016ರಲ್ಲಿ ಕಾಸು ಕೂಡಿಸಿಕೊಂಡು, ಮೊದಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆಗ ಎರಡು ಇಂಚು ಎತ್ತರ ಬೆಳೆದ. ಬಳಿಕ ಈಗ ಎರಡನೇ ಚಿಕಿತ್ಸೆ ಮೂಲಕ 2 ಇಂಚು ಎತ್ತರ ಬೆಳೆದಿದ್ದೇನೆ” ಎಂದು ತಿಳಿಸಿದ್ದಾರೆ.