ಸಾಗರ: ಮಗಳು ಏಕಾಏಕಿ ಬಿಜೆಪಿಯ ಬಾಗಿಲು ತಟ್ಟುತ್ತಿರುವುದು ಎದೆಗೆ ಚೂರಿ ಹಾಕಿದಂತಹ ಅನುಭವ ಆಗಿದೆ. ಇದರ ಪ್ರೇರಣೆ, ತಂತ್ರಗಾರಿಕೆಯಲ್ಲಿ ಹಾಲಿ ಶಾಸಕ ಹಾಲಪ್ಪ ಹರತಾಳು ಅವರ ಪಾತ್ರವೂ ಇರಬಹುದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಡಾ. ರಾಜನಂದಿನಿ ಅವರು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಕ್ಕದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುತ್ತಿರುವ ಸುದ್ದಿ ಲಭ್ಯವಾಗುತ್ತಿದ್ದಂತೆ ಕಾಗೋಡು ಅವರನ್ನು ಪತ್ರಕರ್ತರು ಸಂಪರ್ಕಿಸಿದಾಗ ಅವರು ಪ್ರಥಮ ಪ್ರತಿಕ್ರಿಯೆ ನೀಡಿ, ನಾನು ಈ ಬೆಳವಣಿಗೆಯನ್ನು ಕನಸಿನಲ್ಲಿಯೂ ಕಂಡವನಲ್ಲ. ಇದೊಂದು ದೌರ್ಭಾಗ್ಯ. ನಾನು ಈ ಹಿಂದಿನಿಂದಲೂ ಕಾಂಗ್ರೆಸ್‌ನಲ್ಲಿ ಸ್ಥಿರತೆ ಬದ್ಧತೆ ಕಂಡವನು. ಅದರಲ್ಲಿಯೇ ಸಂತೋಷ, ನೆಮ್ಮದಿಯನ್ನು ಕಂಡವನು. ಈಗಲೂ ನಾನು ಕಾಂಗ್ರೆಸ್ ಪರವಾಗಿಯೇ ಪ್ರಚಾರ ನಡೆಸುತ್ತೇನೆ ಎಂದರು.
ಮಗಳಾಗಿ ಆಕೆ ಹೀಗೆ ಮಾಡುತ್ತಾಳೆ ಎಂಬುದನ್ನು ನಾನು ಕನಸಿನಲ್ಲೂ ಚಿಂತಿಸಿರಲಿಲ್ಲ. ನನ್ನ ಹತ್ತಿರ ಅವಳೇನು ಹೇಳಿಕೊಂಡಿರಲಿಲ್ಲ. ಅವಕಾಶ ಕೊಡಿ ಎಂದು ನಾನು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿಯೂ ಕೇಳಿದ್ದೆ. ಬೇರೆ ಬೇರೆ ರೀತಿಯಲ್ಲಿ ಬಿಜೆಪಿಯಲ್ಲಿ ಅವಕಾಶ ಸಿಗುತ್ತದೆ ಎನ್ನುವುದಾದರೆ ಅಂತಹ ಅವಕಾಶ ಕಾಂಗ್ರೆಸ್‌ನಲ್ಲೂ ಸಿಗುತ್ತಿತ್ತು. ಈಗಲೂ ಅವಳನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಈ ನಡುವೆ ರಾಜನಂದಿನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ಶಾಸಕ ಹಾಲಪ್ಪ ಹರತಾಳು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರ ಜೊತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಈಗಿನ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರೊಂದಿಗೆ ಅಸಮಾಧಾನಗೊಂಡಿದ್ದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ, ಆನಂದಪುರ ಭಾಗದ ಪ್ರಭಾವಿ ರಾಜಕಾರಣಿ ರತ್ನಾಕರ ಹೊನಗೋಡು ಕೂಡ ಬಿಜೆಪಿ ಸೇರಿದ್ದಾರೆ.