Spread the love

ಶಿವಮೊಗ್ಗ: ಪಕ್ಷದ ಏಳಿಗೆಗಾಗಿ ಅಲ್ಲದೆ ಹೊಸ ಅಭ್ಯರ್ಥಿಗಳಿಗೆ ಅವಕಾಶ ಸಿಗಬೇಕೆನ್ನುವ ಸದಭಿರುಚಿಯಿಂದ ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿ ಪಕ್ಷದ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ರಾಜ್ಯ ಚುನಾವಣಾ ಸಮಿತಿಯ ಸಂದರ್ಭದಲ್ಲಿ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರಲ್ಲಿ ಮನವಿಯನ್ನು ಮಾಡಿದ್ದೆ ಅದಕ್ಕೆ ಪಕ್ಷದ ಹಿರಿಯರು ಯಾರೂ ಕೂಡ ಸಮ್ಮತಿ ನೀಡಿರಲಿಲ್ಲ ಹಾಗಾಗಿ ಇಂದು ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು ಈ ಬಾರಿ ನನ್ನ ಹೆಸರನ್ನು ಯಾವುದೇ ವಿಧಾನ ಸಭಾ ಕ್ಷೇತ್ರಕ್ಕೆ ಪರಿಗಣಿಸದಂತೆ ಮನವಿ ಮಾಡಿದ್ದೆ ಅಲ್ಲದೆ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಪೂರ್ಣ ಬಹುಮತವನ್ನು ಕೊಟ್ಟು ಸಂಪೂರ್ಣ ಬಹುಮತ ತರುವಲ್ಲಿ ಹೆಚ್ಚಿನ ಪ್ರಯತ್ನ ಮಾಡುವ ಹಂಬಲದಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇನೆ ಹಾಗಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ಎಲ್ಲ ಕಾರ್ಯಕರ್ತರು ಸೇರಿಕೊಂಡು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡೋಣ ಎಂದು ಹೇಳಿದ್ದಾರೆ.

ಸದ್ಯ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ನನ್ನ ಪತ್ರಕ್ಕೆ ಸಮ್ಮತಿ ಸೂಚಿಸುತ್ತಾರೆ ಎಂಬ ನಂಬಿಕೆ ಇದೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ ಜನರ ಆಸೆಯಂತೆ ದೇಶದಲ್ಲಿ ಮೋದಿ ಸರಕಾರ ಮತ್ತೊಮ್ಮೆ ಬರುವಲ್ಲಿ ನಾವೆಲ್ಲರೂ ಕಿಂಚಿತ್ತು ಸೇವೆ ಮಾಡೋಣ ಎಂದು ಹೇಳಿದರು.

ನಿರ್ಧಾರ ವಾಪಾಸ್ ಪಡೆಯುವಂತೆ ಕಾರ್ಯಕರ್ತರ ಆಗ್ರಹ:

ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಅವರ ನಿವಾಸದ ಬಳಿ ಕಾರ್ಯಕರ ದಂಡೇ ಹರಿದು ಬಂದಿದ್ದು ಈಶ್ವರಪ್ಪ ಅವರ ನಿರ್ಧಾರಕ್ಕೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿರ್ಧಾರ ವಾಪಾಸ್ ಪಡೆಯುವಂತೆ ಈಶ್ವರಪ್ಪಗೆ ಒತ್ತಡವನ್ನೂ ಹಾಕಿದ್ದಾರೆ. ಆದರೆ ಕಾರ್ಯಕರ್ತರ ಯಾವುದೇ ಮನವಿಗೆ ಒಪ್ಪದ ಈಶ್ವರಪ್ಪ ಕಾರ್ಯಕರ್ತರನ್ನು ಸಮಾಧಾನಪಡಿಸಿ ಮನೆ ಒಳಗೆ ತೆರಳಿದ್ದಾರೆ.

 

Leave a Reply

Your email address will not be published. Required fields are marked *