Trending

ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡಲಷ್ಟೇ ಲಾಯಕ್ಕು: ಶಾಮನೂರು ಶಿವಶಂಕರಪ್ಪ ಹೇಳಿಕೆ, ವ್ಯಾಪಕ ಟೀಕೆ

Spread the love

ದಾವಣಗೆರೆ: ‘ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕೇವಲ ಅಡುಗೆ ಮಾಡಲಷ್ಟೇ ಲಾಯಕ್ಕು’ ಎಂದು ಹೇಳುವ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿವಾದ ಸೃಷ್ಟಿಸಿದ್ದಾರೆ. ಶಿವಶಂಕರಪ್ಪ ಅವರ ಹೇಳಿಕೆಗೆ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ಜಿಲ್ಲೆಯ ಬಂಟ್ಸ್ ಭವನದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡಲು ಸಹ ಬರುವುದಿಲ್ಲ. ಅವರು ಕೇವಲ ಅಡುಗೆ ಮಾಡಲು ಮಾತ್ರ ಲಾಯಕ್ಕು. ಲೋಕಸಭೆ ಚುನಾವಣೆಯಲ್ಲಿ ಜನಬೆಂಬಲ ಪಡೆಯುವ ಮುನ್ನ ಅವರು ದಾವಣಗೆರೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದಿದ್ದರು.

ಮುಂದುವರಿದು, ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ಕಮಲದ ಹೂವು ಅರ್ಪಿಸುತ್ತೇನೆ ಎನ್ನುತ್ತಿದ್ದಾರೆ. ಈ ಹಿಂದೆಯೂ ಗೆದ್ದಿದ್ದು ನೀವೆ (ಜಿಎಂ ಸಿದ್ದೇಶ್ವರ) ಅಲ್ಲವೇ? ಆಗ ಹೂವನ್ನು ಕಳುಹಿಸಿದ್ರಾ?. ಮೋದಿಗೆ ಹೂವನ್ನು ಕಳುಹಿಸಿದರೆ ಅಭಿವೃದ್ಧಿ ಆಗುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಕೇವಲ ಮೋದಿ ಮೋದಿ ಎನ್ನುವುದರಿಂದ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದರು.

ಗಾಯತ್ರಿ ಸಿದ್ದೇಶ್ವರ ತಿರುಗೇಟು

ಶಿವಶಂಕರಪ್ಪ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿರುವ ಗಾಯತ್ರಿ, ಶಾಮನೂರು ಶಿವಶಂಕರಪ್ಪ ಅವರು ತಮ್ಮ ಮಾತುಗಳಿಂದ ಮಹಿಳೆಯರನ್ನು ಅವಮಾನಿಸಿದ್ದಾರೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅವರು ಸಮರ್ಥವಾಗಿ ಅಧಿಕಾರವನ್ನು ನಡೆಸುತ್ತಾರೆ. ಇದು ‘ಅಜ್ಜ’ನಿಗೆ ತಿಳಿದಿಲ್ಲದಂತಿದೆ ಎಂದಿದ್ದರು.

‘ಅಡುಗೆ ಮಾಡಿ ಕೈತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಮಹಿಳೆ ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ. ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತಿದ್ದಾರೆ. ಆದರೆ, ಇಂತಹವರು ಮಹಿಳೆಯರಿಗೆ ಅಪಮಾನ ಮಾಡುತ್ತಾರೆ’ ಎಂದು ಶಿವಶಂಕರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ.

ಸೈನಾ ನೆಹ್ವಾಲ್ ಕಿಡಿ

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿಶ್ವದ ನಂ 1 ಬ್ಯಾಡ್ಮಿಂಟನ್ ಮಾಜಿ ಆಟಗಾರ್ತಿ ಸೈನಾ ನೆಹ್ವಾಲ್, ‘ಮಹಿಳೆಯನ್ನು ಅಡುಗೆಮನೆಗೆ ಸೀಮಿತಗೊಳಿಸಬೇಕು’ ಎಂದು ಕರ್ನಾಟಕದ ಪ್ರಮುಖ ನಾಯಕರಾದ ಶಾಮನೂರು ಶಿವಶಂಕರಪ್ಪ ಜಿ ಹೇಳಿದ್ದಾರೆ. ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ (ನಾನು ಹುಡುಗಿ, ನಾನು ಹೋರಾಡಬಲ್ಲೆ) ಎಂದು ಹೇಳುವ ಪಕ್ಷದಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

 

[pj-news-ticker]