ಚಿಕ್ಕಮಗಳೂರು: ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು. ಈಗಾಗಲೇ ಟಿಕೆಟ್ ಘೋಷಿಸಿರುವ ಅಭ್ಯರ್ಥಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿಲ್ಲದಿದ್ದರೆ ಕರೆಸಿ ಮಾತುಕತೆ ನಡೆಸುತ್ತೇವೆ. ಬದಲಾವಣೆ ಮಾಡಬೇಕಾದ ಸ್ಥಿತಿ ಇದ್ದರೆ ಮಾಡುತ್ತೇವೆ’ ಎಂದು ಹೇಳಿದರು.
ಬಳಿಕ ವೈ.ಎಸ್.ವಿ. ದತ್ತ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವೈ.ಎಸ್.ವಿ. ದತ್ತ ಯಾರೆಂದು ನನಗೆ ಗೊತ್ತಿಲ್ಲ. ಅವರು ತುಂಬಾ ದೊಡ್ಡವರು ಅವರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ನನ್ನದು ಸಣ್ಣ ಪಕ್ಷ. ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ? ಅವರು ಇಂಟರ್ ನ್ಯಾಷನಲ್ ಪಕ್ಷ ಸೇರಲು ಹೊರಟಿರುವವರು, ನನ್ನ ಪಕ್ಷದಲ್ಲಿ ಪಾಪ ಅವರಿಗೇನು ಸಿಗುತ್ತದೆ. ಅವರು ದೊಡ್ಡ ಪಕ್ಷದಲ್ಲೇ ಇರಲಿ ಎಂದು ತಿಳಿಸಿದರು.