ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯ ಬೆಂಬಲ ನೀಡುವುದಾಗಿ ಬುಧವಾರ ಹೇಳಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಪಕ್ಷ ಕಾಂಗ್ರೆಸ್, ಚಿತ್ರನಟರು ಯಾರನ್ನು ಬೇಕಾದರೂ ಬೆಂಬಲಿಸಲು ಸ್ವತಂತ್ರರು. ಆದರೆ ಕೆಲವೊಮ್ಮೆ ಐಟಿ-ಇಡಿ ಅಥವಾ ಇತರೆ ಸಂಗತಿಗಳು ಇದರ ಹಿಂದೆ ಕೆಲಸ ಮಾಡುತ್ತವೆ ಎಂದು ವ್ಯಂಗ್ಯವಾಡಿದೆ.
ಚಿತ್ರನಟರು ಯಾರನ್ನು ಬೆಂಬಲಿಸಬೇಕೆಂದು ಆಯ್ಕೆ ಮಾಡಿಕೊಳ್ಳಲು ಅವರು ಸ್ವತಂತ್ರರು. ಆದರೆ, ಕೆಲವೊಮ್ಮೆಐಟಿ, ಇಡಿ ಅಥವಾ ಬೇರೆ ಕಾರಣಗಳು ಇರುತ್ತವೆ. ಕರ್ನಾಟಕದಲ್ಲಿ ಬಿಜೆಪಿಯ ದಿವಾಳಿತನ ಸ್ಪಷ್ಟವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರು ಟ್ವೀಟ್ ಮಾಡಿದ್ದಾರೆ.
ಈಗ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರ ಮಾತುಗಳನ್ನು ಕೇಳಲು ಯಾರೂ ಸುಳಿಯದ ಕಾರಣ ಅವರು ಈಗ ಪ್ರೇಕ್ಷಕರನ್ನು ಸೆಳೆಯಲು ಚಲನಚಿತ್ರ ತಾರೆಯರನ್ನು ಅವಲಂಬಿಸಿದ್ದಾರೆ. ಆದರೆ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಸಿನಿಮಾ ತಾರೆಯರಲ್ಲ ಎಂದು ಸುರ್ಜೇವಾಲ ಅವರು ಟಾಂಗ್ ನೀಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಬೊಮ್ಮಾಯಿ, ಚಿತ್ರನಟರ ಮುಂದೆ ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.