ಕುಣಿಗಲ್ : ಪುರಾತನ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ವೇಳೆ ಮಡಿಕೆಯಲ್ಲಿ 65 ಚಿನ್ನದ ನಾಣ್ಯಗಳು ಪತ್ತೆಯಾಗಿರುವ ಘಟನೆ ತಾಲೂಕಿನ ಅಮೃತೂರು ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಅಮೃತೂರಿನ ದೊಡ್ಡಕೆರೆ ಅಲದಮರದ ಬಳಿ ಇರುವ ಪುರಾತನ ಚೋಳರಕಾಲದ ಶ್ರೀ ನರಸಿಂಹಸ್ವಾಮಿ ದೇವಾಲಯದ ಶಿಥಿಲಗೊಂಡ ಕಾರಣ ಇದರ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿತು. ನಿನ್ನೆ ದೇವಾಲಯ ನಿರ್ಮಾಣಕ್ಕೆ ಭೂಮಿ ಅಗೆಯುತ್ತಿದ್ದ ವೇಳೆ ಮಡಿಕೆ ಕಾಣಿಸಿಕೊಂಡಿದೆ. ಅದನ್ನು ಕೆಲಸ ಮಾಡುವ ವ್ಯಕ್ತಿಗಳು ಹೊರ ತೆಗೆದು ದೇವಾಲಯದ ಅರ್ಚಕ ಕುಮಾರ್ ಗೆ ನೀಡಿದ್ದಾರೆ.
ಅರ್ಚಕ ಮಡಿಕೆಯನ್ನು ತೆಗೆದು ನೋಡಿದಾಗ ಚೋಳರಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಇದನ್ನು ಅರ್ಚಕ ತನ್ನ ಮನೆಗೆ ತೆಗೆದುಕೊಂಡು ಇಟ್ಟುಕೊಂಡಿದ್ದನ್ನು ಎನ್ನಲಾಗಿದ್ದು, ವಿಷಯ ತಿಳಿದ ಪೊಲೀಸರು ಅರ್ಚಕನ ಮನೆ ಬಳಿಗೆ ಹೋಗಿ ಚಿನ್ನದ ನಾಣ್ಯವನ್ನು ವಶಪಡಿಸಿಕೊಂಡು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ.