ಸಾಗರ: ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಜಿಪಂ, ತಾಪಂ, ಗ್ರಾಪಂ ಅಧಿಕಾರದ ಕುತ್ತಿಗೆ ಹಿಸುಕಿದ್ದ ಕೆ.ಎಸ್. ಈಶ್ವರಪ್ಪ ಈಗ ಲೋಕಸಭೆ ಪ್ರವೇಶ ಮಾಡಿ ಇನ್ನಷ್ಟು ವ್ಯವಸ್ಥೆ ಹಾಳು ಮಾಡಲು ಸಜ್ಜಾಗಿದ್ದಾರೆ.ಅವರು ಸ್ಪರ್ಧೆಯಲ್ಲಿ ಕನಿಷ್ಠ 25 ಸಾವಿರ ಮತ ಪಡೆದರೆ ನಾನು ಅವರನ್ನು ಒಬ್ಬ ನಾಯಕ ಎಂದು ಒಪ್ಪಿಕೊಳ್ಳುತ್ತೇನೆ ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸವಾಲೆಸೆದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಸಚಿವರಾಗಿ ವ್ಯವಸ್ಥೆಯನ್ನೇ ಹಾಳು ಮಾಡಿರುವ ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ಮಾಡಿದರೆ ಜನರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.
ಗ್ರಾಪಂ ಶಾಸನಬದ್ಧ ಅನುದಾನಕ್ಕೆ ಸಚಿವರಾಗಿ ಕೊಡಲಿಪೆಟ್ಟು ಕೊಟ್ಟವರು ಈಶ್ವರಪ್ಪ. ರಾಜ್ಯಮಟ್ಟದಲ್ಲಿ ಸೋಲಾರ್ ಟೆಂಡರ್ ಕರೆದು ಪ್ರತಿ ಗ್ರಾಪಂನಿಂದ 1.25 ಲಕ್ಷ ರೂ. ವಸೂಲಿ ಮಾಡಿದ್ದಾರೆ. ರಾಜ್ಯದ 6,300 ಗ್ರಾಪಂನಿಂದ ತಲಾ 5 ಲಕ್ಷ ರೂ.ನಂತೆ ಹಣ ವಸೂಲಿ ಮಾಡಲಾಗಿದೆ.ಈಗಾಗಲೇ ಅಳವಡಿಸಿದ್ದ ಸೋಲಾರ್ ಪೂರ್ಣ ಹಾಳಾಗಿದೆ. ಗ್ರಾಪಂಗೆ ಕಸ ವಿಲೇವಾರಿ ಆಟೋ ಟಿಪ್ಪರ್ ಸಹ ಅವರೇ ಸರಬರಾಜು ಮಾಡಿದ್ದಾರೆ. ಇದರಲ್ಲಿಯೂ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು ಆಟೋ ಟಿಪ್ಪರ್‌ಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಇದು ಈಶ್ವರಪ್ಪ ಅವರ ಸಚಿವ ಸ್ಥಾನದ ಸಾಕ್ಷಿಗಳಾಗಿವೆ. ನಾನು ತಾಪಂ ಅಧ್ಯಕ್ಷನಾಗಿದ್ದರಿಂದ ಇದನ್ನು ವಿರೋಧಿಸಿದ್ದರಿಂದ ನಮ್ಮ ತಾಲೂಕಿನ 20ಕ್ಕೂ ಹೆಚ್ಚು ಗ್ರಾಪಂನಿಂದ ಹಣ ಕೊಟ್ಟಿಲ್ಲ ಎಂದರು.
ಗೋಷ್ಠಿಯಲ್ಲಿ ಗಣಪತಿ ಹೆನಗೆರೆ, ಸ್ವಾಮಿಗೌಡ, ನಾಗರಾಜ ಮಜ್ಜಿಗೆರೆ ಇದ್ದರು.