ವಿಜಯಪುರ : ದಾಖಲೆ ಇಲ್ಲದೆ ವಿಜಯಪುರ ಮಾರ್ಗವಾಗಿ ವಾಹನದಲ್ಲಿ ಸಾಗಿಸುತ್ತಿದ್ದ 2.93 ಕೋಟಿ ರೂ. ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೈದರಾಬಾದ್ ನಿಂದ ಹುಬ್ಬಳ್ಳಿಗೆ ವಿಜಯಪುರ ಮಾರ್ಗವಾಗಿ ಅಕ್ರಮವಾಗಿ ದಾಖಲೆ ಇಲ್ಲದ ಹಣವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.ಇದನ್ನು ಆಧರಿಸಿ ಸೋಮವಾರ ರಾತ್ರಿ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ವಿಜಯಪುರ ಸಿಇಎನ್ ಪೊಲೀಸರ ಗಸ್ತಿನಲ್ಲಿದ್ದಾಗ ಇದೇ ಮಾರ್ಗವಾಗಿ ಎಂ.ಎಚ್. 01-CD 7537 ಸಂಖ್ಯೆಯ ಟೊಯೋಟಾ ವಾಹನದಲ್ಲಿ ಹಣ ಸಾಗಿಸಲಾಗುತಿತ್ತು.ಸಿಪಿಐ ಸುನಿಲಕುಮಾರ ನಂದೇಶ್ವರ ನೇತೃತ್ವದಲ್ಲಿ ಪೊಲೀಸರು ಟೊಯೋಟಾ ವಾಹನ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಅಕ್ರಮವಾಗಿ ವಾಹನದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2,93,50,000 ನಗದು ಹಣ ಪತ್ತೆಯಾಗಿದೆ. ವಾಹನದಲ್ಲಿದ್ದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಮೂಲದ ಬಾಲಾಜಿ ನಿಕ್ಕಂ ಹಾಗೂ ಸಚಿನ್ ಮೋಹಿತೆ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ 2.93 ಕೋಟಿ ರೂ. ನಗದು, ಬಂಧಿತರ ಬಳಿ ಇದ್ದ ಎರಡು ಮೊಬೈಲ್ ಹಾಗೂ ಟೊಯೋಟಾ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಸಿಇಎನ್ ಸಿಪಿಐ ಸುನಿಲಕುಮಾರ ಸಂದೇಶ್ವರ ಗೋಲಗುಂಬಜ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.ಪ್ರಕರಣ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಬಹುಮಾನ ವಿತರಣೆ ಮಾಡಿದ್ದಾಗಿ ಎಸ್ಪಿ ಋಷಿಕೇಶ ಭಗವಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.