Spread the love

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ತಮ್ಮ ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿರುವ ಬಗ್ಗೆ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಅವರು, ಇದು ಕ್ಷುಲ್ಲಕ ವ್ಯಕ್ತಿಗಳಿಂದ ಕ್ಷುಲ್ಲಕ ರಾಜಕೀಯ ಎಂದಿದ್ದಾರೆ.

ಕಳೆದ ವಾರ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ನಂತರ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೋಮವಾರ ಸೂಚಿಸಲಾಗಿದೆ.

ಲೋಕಸಭೆಯ ವಸತಿ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದ್ದು,  2005 ರಿಂದ ತುಘಲಕ್ ಲೇನ್ ಬಂಗಲೆಯಲ್ಲಿ, ಝಡ್ ಪ್ಲಸ್ ಭದ್ರತೆಯೊಂದಿಗೆ ವಾಸಿಸುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಿಗೆ ಮನೆ ಖಾಲಿ ಮಾಡುವಂತೆ ಪತ್ರ ಬರೆದಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಸಿಬಲ್, “ರಾಹುಲ್ ಬಂಗಲೆ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಅವರ ಆತ್ಮಸಾಕ್ಷಿಯು ರಜೆಯ ಮೇಲೆ ಹೋಗಿದೆ. ಕ್ಷುಲ್ಲಕ ವ್ಯಕ್ತಿಗಳಿಂದ ಕ್ಷುಲ್ಲಕ ರಾಜಕೀಯ” ಎಂದು ಟ್ವೀಟ್ ಮಾಡಿದ್ದಾರೆ.

ಯುಪಿಎ 1 ಮತ್ತು 2ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

Leave a Reply

Your email address will not be published. Required fields are marked *